ಮೆಕಾಲೆ, ರೋಸ್
1881-1958. ಇಂಗ್ಲಿಷ್ ಕಾದಂಬರಿಗಾರ್ತಿ. ಹುಟ್ಟಿದ್ದು ಕೇಂಬ್ರಿಜ್‍ನಲ್ಲಿ. ತಂದೆ ಜೆ.ಸಿ. ಮೆಕಾಲೆ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯದ ಪ್ರಾಧ್ಯಾಪಕನಾಗಿದ್ದ.

	ಈಕೆ ಬಾಲ್ಯವನ್ನು ಇಟಲಿಯಲ್ಲಿ ಕಳೆದಳು. ಕಡಲು, ಕಡಲಯಾನ, ಈಜು ಈಕೆಗೆ ತುಂಬ ಪ್ರಿಯವಾದ ಹವ್ಯಾಸಗಳು. ಆಕ್ಸ್‍ಫರ್ಡ್‍ನಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾಭ್ಯಾಸ ನಡೆಸಿದಳು. ಹದಿಹರೆಯದವಳಿರುವಾಗಲೆ ಬರೆಯುವ ಹವ್ಯಾಸದಲ್ಲಿ ತೊಡಗಿದ್ದಳು. 1911ರಲ್ಲಿ ಮೊದಲ ಕಾದಂಬರಿ ದ ವ್ಯಾಲಿ ಆಫ್ ಕ್ಯಾಪ್ಟೀವ್ಸ್ ಪ್ರಕಟವಾಯಿತು. ಈಕೆ ಪ್ರಸಿದ್ಧಿಗೆ ಬಂದುದು ಪಾಟೆರಿಸಮ್ (1920) ಎಂಬ ಕಾದಂಬರಿಯಿಂದ. ಇದರ ಹಿಂದೆಯೇ ಡೇಂಜರಸ್ ಏಜಸ್ (1921) ಪ್ರಕಟಗೊಂಡಿತು. ಈ ಪುಸ್ತಕಕ್ಕೆ ಪ್ರಶಸ್ತಿಯೂ ಲಭಿಸಿತು.

	ಮಿಸ್ಟರಿ ಅಟ್ ಜಿನೀವ (1922) ; ಟೋಲ್ಡ್ ಬೈ ಆ್ಯನ್ ಈಡಿಯೆಟ್ (1923); ಆರ್ಫನ್ ಐಲೆಂಡ್ (1924); ಕ್ರೂ ಟ್ರೈನ್ (1926); ಕೀಪಿಂಗ್ ಅಪ್ ಅಪಿಯರೆನ್‍ಸಸ್ (1928); ಸ್ಟೇಯಿಂಗ್ ವಿತ್ ರಿಲೇಷನ್ಸ್ (1930); ದೆ ವರ್ ಡಿಫೀಟೆಡ್ (1932); ಗೋಯೀಂಗ್ ಅಬ್ರಾಡ್ (1934); ಐ ವುಡ್ ಬಿ ಪ್ರೈವೇಟ್ (1937); ಅಂಡ್ ನೊ ಮ್ಯಾನ್ಸ್ ವಿಟ್ (1940); ದ ವಲ್ರ್ಡ್ ಮೈ ವೈಲ್ಡರ್‍ನೆಸ್ (1950)-ಇವು ಅನಂತರ ಪ್ರಕಟಗೊಂಡ ಕಾದಂಬರಿಗಳು. ದೆ ವೆಂಟ್ ಟು ಪೋರ್ಚುಗಲ್ (1948); ದ ಪೇಬಲ್ಡ್ ಷೋರ್ (1950)-ಇವು ಪ್ರವಾಸ ಕಥನಗಳು. ದ ಟೂ ಬ್ಲೈಂಡ್ ಕಂಟ್ರೀಸ್ (1914); ತ್ರೀ ಡೇಸ್ (1919); ಪೊಯಮ್ಸ್ (1927)-ಇವು ಕವನ ಸಂಗ್ರಹಗಳು. ಅಲ್ಲದೆ ಜಾನ್ ಮಿಲ್ಟನ್ ಹಾಗೂ ಇ.ಎಮ್.ಫಾಸ್ಟರ್ ಅವರನ್ನು ಕುರಿತಂತೆ ಪುಸ್ತಕಗಳು ಬಂದಿವೆ.

	ಕುಮಾರಿಯಾಗೇ ಉಳಿದ ಈಕೆ ಸುಸ್ವಭಾವದ ಶುದ್ಧ ಚಾರಿತ್ರ್ಯವುಳ್ಳ ಸಭ್ಯ ಮಹಿಳೆ. ಕೊಂಚ ಸಿನಿಕತನ ಕಂಡರೂ ಮೃದುಮಾತಿನ ವಿಚಾರಶೀಲೆ. ಈಕೆಯ ಕಾದಂಬರಿಗಳು ಚುರುಕು ಬುದ್ಧಿ, ಲಘು ವಿಡಂಬನೆ, ಮಾತಿನ ಚಾತುರ್ಯ ಆತ್ಮೀಯ ದನಿಗಳಿಂದ ಕೂಡಿದ್ದು ಮನರಂಜಕವಾಗಿವೆ. ಜೀವನದಲ್ಲಿ ಹೆಣ್ಣು ಗಂಡಿನ ಪ್ರಣಯ ಆಕರ್ಷಕವಾದುದು, ನಿಜ. ಆದರೆ ಅದೇ ಬದುಕಿನ ಸರ್ವಸ್ವವಲ್ಲ. ವಾಸ್ತವ ಜೀವನದ ಭಯಾನಕ ಸಂಗತಿಗಳಾದ ಅಜ್ಞಾನ, ಸಣ್ಣತನ, ಕ್ರೌರ್ಯ, ಹಿಂಸೆಗಳಲ್ಲಿ ತೊಡಗದೆ ಶಾಂತಿ-ಸೌಹಾರ್ದಗಳಿಂದ ಬದುಕಲು ಕಲಿಯುವುದರಿಂದ ಮಾತ್ರ ಮಾನವ ಕಲ್ಯಾಣ ಸಾಧ್ಯ ಎಂಬುದು ಈಕೆ ದೃಢವಾಗಿ ನಂಬಿದ ಜೀವನ ತತ್ತ್ವವಾಗಿತ್ತು.

	ಈಕೆ ಫಾದರ್ ಜಾನ್ಸನ್‍ರಿಗೆ ಬರೆದ ಪತ್ರಗಳನ್ನೆಲ್ಲ ಸಂಗ್ರಹಿಸಿ ಎರಡು ಸಂಪುಟಗಳಲ್ಲಿ ಪ್ರಕಟಿಸಲಾಗಿದೆ. 1958ರಲ್ಲಿ ಈಕೆ ಮರಣಹೊಂದಿದಳು. ಅದೇ ವರ್ಷ ಈಕೆಯನ್ನು ಡೇಮ್ ಕಮ್ಯಾಂಡರ್ ಆಫ್ ದಿ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್ (ಡಿ.ಬಿ.ಇ.) ಆಗಿ ಪರಿಗಣಿಸಲಾಯಿತು.										
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ